Sunday, March 24, 2013

ಅನುದಿನ ಅನುಕ್ಷಣ


ಎನ್ ಒಡಲಾಳದಲ್ಲಿಳಿದು ಮನೆ ಮಾಡಿ
ಒಲವ ದೀಪವನುರಿಸಿ ಹೋದೆ ನೀನು
ಅದೇ ಪಣತಿಗೆ ನಿನ್ನ ನೆನಪುಗಳೆಂಬ
ಬತ್ತಿಯ ಜೊತೆಗೆ ನನ್ನೊಲವ ಪಯಣ
ಎಂಬ ತೈಲ ಸುರಿದು ಬಾಳಲಿ ನಿಂದಿಹ
ತಮ ಓಡಿಸಿ ಮನದ ಮನೆಯ ದಿನ
ಬೆಳಗುತಿಹೆನು ನಿನ್ನ ನಾಮ ಸ್ಮರಿಸಿ
ಅನುದಿನ ಅನುಕ್ಷಣ

ರುಕ್ಮಿಣಿ ಎನ್.

ನಾ ಹ್ಯಾಂಗ್ ಮಾಡ್ಲ್ಯವ್ವ ಸಂಸಾರ



ನಾ ಹ್ಯಾಂಗ್ ಮಾಡ್ಲ್ಯವ್ವ ಇವನ್
ಕೂಡ ನೀಗದ ಸಂಸಾರಾನ,ಮೈ
ಮುರ್ದ್ ದುಡಿಯುದಂತೂ ಗೊತ್ತಿಲ್ಲಿವಗ
ಹಿರ್ಯಾ ಆಗಿ ಮನಿ ನಡಿಸುಡ್ ಗೊತ್ತಿಲ್ಲ್
ಸಾಕಾಗಿ ಹೋಗೈತಿ ನನ್ನವನ ಕಾಲಾಗ್

ಅವನ ಮನಿ ಹೊಸ್ತಿಲಾ ತುಳಿ ಮುಂದ್
ಅದೆನೆಲ್ಲ ಕನಸ್ ಕಂಡಿರ್ಲಿಲ್ಲ ನಾನ್
ಅತ್ತಿ-ಮಾವಾಗ ಮುದ್ದಿನ ಸೊಸಿ ಆಗಿ
ಗಂಡನ ಇಚ್ಚಿ ಅರಿಯೂ ಸತಿಯಾಗಿ
ಸಂಸಾರಾನಾ ಸ್ವರ್ಗಾ ಮಾಡ್ತನಂತ್

ಅಪ್ಪ-ಅವ್ವಂದ ಒಂದ ಮಾತ್ ಕೇಳುಲ್
ಕುಡದ್ ಅಮಲಿನ್ಯಾಗ್ ಹೊಯ್ದಾಡು ಅವನ್
ಬಡಕಾಯದಂಗ್ ಅವನ್ ಮನ್ಸು ಚಿತ್ತ
ಚಂಚಲಾ ಒಂದ್ ಕಡೀ ಇರುದಿಲ್ ನೋಡ್
ಒಮ್ಮಿ ಇದಂತಾನೂ ಒಮ್ಮಿ ಅದಂತಾನೂ

ಒಂದಲ್ಲಂತ ಯಾಡ್ ಮಕ್ಳಾ ಹಿರದ್ ತಗ್ದಾನ್,
ಆದ್ರೂ ಇವನ್ ತೀಟಿ ತೀರಿಲ್ಲ. ಹೊಟ್ಟಿಗಿ ಹಿಟ್ಟಿಲ್ಲ
ಉಡಾಕ್ ಚೆಂದಾನ್ ಆರಿವಿಲ್ಲ, ಮಾಡ್ಕೊಂಡಕಿನ್
ಸಾಕಾಕ್ ಇವನ್ ಹಂತೇಕ ಸಗತಿ ಇಲ್ಲ
ಜನ ನೋಡಿ ನಗುವಂಗ್ ಆಗೈತಿ ಬಾಳೆವ

ಇವ ಹಿಂಗ ಕುಂತ್ರ ಹ್ಯಾಂಗ್ ನನ್ನವ್ವ
ಇವನ ಕಾಲಾಗ್ ಜೀವನ ಸಾಕಾಗೈತಿ
ಮಾರಿಮ್ಯಾಲ ಬಿಸಲ್ ಬೀಳು ಮಟಾ
ಮಲ್ಕೋತಾನ್ ಆಮ್ಯಾಕ್ ತಿಂದುಂಡ ಕಟ್ಟಿಗಿ
ಕುಂತ ಊರ್ ಉಸಾಬರಿ ಸೂರು ಮಾಡ್ತಾನ್

ಕೈಯಾಗೊಂದ್ ಬಗಲಾಗೊಂದ್ ಕೂಸಿನ
ಹಿಡ್ಕೊಂಡ ಯಾರ್ಯಾರ್ ಹೊಲ ಅಂತ ನಾ
ಕೆಲಸ ಮಾಡ್ಲೆ ಬೇ, ಉರಿ ಉರಿ ಬೀಸಲಾಗ್
ಹುಡುಗುರ್ ಮಕಾ ಅನ್ನಂಗಿಲ್ಲ ಕರ್ರಗ
ಕಳಾ ಹೀರಿ ಒಗದಂಗಾಗೈತಿ ಕೂಸಿನೂ

ಇಂವ ಹಿಂಗ್ ಹೋದ್ರ ನನ್ ಸಂಸಾರ್
ಬೀದಿಪಾಲ ಅಗುದ ಭಾಳ ದಿನ ಉಳಿದಿಲ್ಲ್
ನನ್ನ ಮಕ್ಕಳನ ನಿನ್ ಉಡ್ಯಾಗ್ ಹಾಕ್ತೀನಿ
ಅವಕುರ ಸಾಲೀ ಗೀಲಿ ಎಲ್ಲ ನಿನ್ ಕೈಯಾಗ್
ಮನಿಗಿ ನಾ ಗಂಡಸಾಗಿ ನಿಲ್ಲುದ್ ಬಂದೈತಿ

ಇವನ್ ಹೆಗಲಿಗೆ ಹೆಗಲ್ ಕೊಟ್ಟ ನಿಲ್ತನ್
ಪಾಲೀನೆಂಗ ಕೊಟ್ಟ ಹೊಲ ಬಿಡಿಸ್ಕೋತನ್
ಎತ್ತಾ ಕಟ್ಟಿ ಬಂಡಿ ಹೂಡಿ, ಅವನ ಕೂಡಿ
ಕೈ ಕೈ ಕೂಡಿಸಿ ಹೊಲ ಇವತ್ ಬಿತ್ತತನ
ಖರ್ಚಿಗೆ ಎರಿ ಹೊಲ ಅಡಿವಿಡ್ತನ್

ಆಳ್ ಹಚ್ಚತನ್ ಕಳೆ ತೆಗಿಸ್ತನ್ ಗೊಬ್ಬರ
ಹಾಕಿಸ್ತನ್ ಔಷಾದ್ ಹೊಡಿಸ್ತನ್, ಭೂಮಿ
ತಾಯಿನ ಅಂಗೈಯಾಗಿಟ್ಟ ಕಾಪಾಡಿ ಬಂದ
ಪೈರ್ ತಗ್ಯಾಕ್ ನೆರಿ-ಹೊರಿ ಕರ್ಕೊಂಡ್
ಸುಗ್ಗಿ ಮಾಡಿ ಬಡತನ ಮೆಟ್ಟಿ ನಿಲ್ತನ್

ಕತ್ತಲಾತು ಹಿರ್ಯಾ ಬರು ಹೊತ್ತಾತು
ಕಾಣಿಲ್ಲ ಅಂದ್ರ್ ಸಲ್ಲದ ಮತ್ ಆಡ್ತಾನ್
ನಿನ್ ಅಂಗಳದಾಗ್ ನಿನ್ನ ನೆರಳಿನ್ಯಾಗ
ಒಡ್ಯಾಡ್‌ಕೊಂಡಿರ್‍ಲಿ ನನ್ನ ಕರುಳ ಬಳ್ಳಿ
ಹೋಗಿ ಬರ್ತನ ಆಶೀರ್ವಾದ ಮಾಡವ

ರುಕ್ಮಿಣಿ ಎನ್.

ಜೀವಜಲ



ಹೃದಯ ಕೊಳ ಬರಿದಾಗಿ,
ಜೀವ ಜಲ ಬತ್ತಿ ಹೋಗಿ,
ಒಲವಿನ ಕೆಂಗುಲಾಬಿ ನಿನ್ನ
ಮುನಿಸೆಂಬ ಬಿಸಿಲ ಬೇಗೆಯಲಿ
ಕಮರಿಹೋಗಿದೆ ಇನಿಯ,
ಇನ್ನಾದರೂ ಜೀವ ಜಲವ
ನೀಡುವೆಯ….

ರುಕ್ಮಿಣಿ ಎನ್.

ಮನೆಗೆ ಬರುವ ಸಮಯ


ಘಂಟೆ ಐದಾಯಿತು ನೀವು ಬರುವ ವೇಳೆಯು ಆಯಿತು
ಮನೆಗೆಲಸ ಮುಗಿಸಿ ಹೀಗೆ ಅಡ್ಡಾಗಿದ್ದೆ, ನೋಡಿ ಗೋಡೆಯ
ಮೇಲಿನ ಗಡಿಯರಕೂ ನಿಮ್ಮ ಮೇಲೆ ಅದೆಷ್ಟು ಒಲವೆಂದು
ನಿದ್ದೆ ಮಂಪರಿಗೆ ಜಾರಿದ ನನ್ನನ್ನು ಎಚ್ಚರಿಸಿಯೇ ಬಿಟ್ಟಿತು

ಕಸ ಗುಡಿಸಿ ಅಂಗಳಕೆ ನೀರೆರಚಿ ರಂಗವಲ್ಲಿಯ ಬಿಡುವೆ
ತಲೆ ಬಾಚಿ ಕೈ-ಕಾಲು ಮುಖ ತೊಳೆದು ದೀಪವ ಹಚ್ಚುವೆ
ಹೋಗುವ ಅವಸರದಿ ಇವತ್ತಿನ ತಿಂಡಿ ಏನೆಂದು ಹೇಳದೆ
ಹೋದಿರಿ ಡಬ್ಬಿ ಕಟ್ಟುವ ಭರದಲ್ಲಿ ಕೇಳುವುದ ಮರೆತು ಹೋದೆ

ದಿನವೆಲ್ಲ ಕೆಲಸದ ಒತ್ತಡ ಅದ್ಯಾರೊಡನೆ ಮುನಿದುಕೊಂಡು ಬರಿವಿರಿ
ಆ ಮುನಿಸ ಮರೆಸಲು ನಿಮಗಿಷ್ಟದ ಅದ್ಯಾವ ತಿಂಡಿ ಮಾಡಾಕಲಿ
ಇವತ್ತಿನ ನಿಮ್ಮ ಪ್ರೆಸೆಂಟೇಶನ್ ಚೆನ್ನಾಗಾಗಿ ನಗುತ ಬರುವಿರಾ
ಆ ನಗುವ ದುಗುಣಗೊಳಿಸಲು ನಿಮ್ಮಿಷ್ಟದ ರಂಗಿನ ಸೀರೆಯುಡಲಾ

ವರುಷಗಳೆ ಕಳೆದವು ಪತಿರಾಯ ನಿಮ್ಮ ಭಯವಿನ್ನೂ ಕಳೆದಿಲ್ಲ
ಅಂಜಿಕೆಯನ್ನು ಮಡಿಲಲಿ ಕಟ್ಟಿಕೊಂಡು ಅನುದಿನ ನಡೆದಿರುವೆನಲ್ಲ
ನೀವು ನಗುತಿರುವಾಗ ಜೊತೆಗೆ ನಗುವೆ ಕೋಪವಿರೆ ಸುಮ್ಮನಿರುವೆ
ಸದ್ಯಕ್ಕೆ ನೀವದ್ಯಾವ ಮೂಡಿನಲ್ಲಿ ಬರುವಿರೆಂದು ಕಾದು ಕುಳಿತಿರುವೆ.

ರುಕ್ಮಿಣಿ ಎನ್.

ಉಪಕಾರ ಮಾಡಿಬಿಡು


ಪದೇ ಪದೇ ನೆನಪಾಗದೇ ಒಂಟಿಯಾಗಿ
ಬಿಟ್ಟು ಒಂದಿಷ್ಟು ಉಪಕಾರ ಮಾಡಿಬಿಡು
ನೀನಿಲ್ಲದೇ ಅರೆಗಳಿಗೆ ಬದುಕಲಾರೆನೆಂದು
ನಾನಿನ್ನೆಂದೂ ಖಂಡಿತಾ ಹೇಳಲಾರೆನು

ನಮ್ಮಿಬ್ಬರ ಸಂಬಂಧವೇಕೆ ಮುರಿದೋಯಿತು
ಆ ನಿನ್ನ ಪ್ರೀತಿಯೇಕೆ ಮುನಿಸಿಕೊಂಡಿತು
ನೀನಿಲ್ಲದೇ ರಾತ್ರಿಗಳೂ ಪ್ರತಿ ಮಾತುಗಳೂ
ಅಪೂರ್ಣಗೊಳ್ಳುತ್ತಿವೆ ನಿನಗದರರಿವಿಲ್ಲ

ನೀನೆ ಇಲ್ಲ ನಿನ್ನ ನೆನಪು ಮಾತ್ರ ಉಳಿದಿದೆ
ಕಣ್ಣಂಚಿನಲಿ ಕಂಬನಿ ಗುಡಾರ ಹಾಸಿದೆ
ನನ್ನ ಮರೆತು ದೂರ ಹೋಗಲು ಅದ್ಯಾವ
ನೆಪ ನಿನಗೆ ಅದಾದರೂ ಹೇಳಿ ಹೋಗು

ರುಕ್ಮಿಣಿ ಎನ್.

ಅವಳು (ಪ್ರೀತಿ) ಮಾಡಿದ ಫಜೀತಿ


ಜರೂರಿ ಕೆಲಸದ ನಿಮಿತ್ತ ಹೋದನವನು
ಪರರಾಜ್ಯಕೆ, ಹೋಗುವಾಗ ಸಮಯವ
ನೀಡಲಿಲ್ಲ ಗೆಳತಿ ಕಾಯುವ ಒಲವಿನ ಸಾಮ್ರಾಜ್ಯಕೆ

ಹುಡುಗಿಯ ಕಾಣದೇ ಬಂದ ಇತ್ತ ಅವನು ಸಪ್ಪೂ
ಹೋಗುವ ಮುನ್ನ ಇನಿಯನ ನೋಡಲಿಲ್ಲವೆಂದು
ಇತ್ತ ಈಕೆಯ ವದನದಲೂ ಸಪ್ಪು ಸಪ್ಪಿನ ಛಾಪೇ

ಸಾರಿ ಕಣೆ ಬರುವಾಗ ಕಾಣಲಿಲ್ಲ ಎಂದು ಸಂದೇಶ
ಬಂತು, ಹೋಗು ಅಲ್ಲಿಯೇ ಬೇರಯವರನ್ನು ಹುಡುಕಿಕೋ
ಎಂಬಂತೆ ಮನದ ಬಾಗಿಲವನ್ನೇ ಮುಚ್ಚಿದಳು ರೊಚ್ಚಿಗೆದ್ದು

ಹುಡುಗ ಹಲುಬಿದ, ಆಕೆಗಾಗಿ ಕಣ್ಣೀರು ಬೇರೆ ಮಿಡಿದ
ಶುರುವಾಯಿತು ಗೋಳಾಟ ಸಂದೇಶಗಳ ಭಾರಿ ಓಟ
ಕಾಲ್- ಮೆಸೇಜ್ ಗಳು ದಣಿದಿರಬೇಕು, ಹಟದಿಂದ ದಣಿಯಲಿಲ್ಲ ಜಂಭದುಡುಗಿ

ದಿನ ಇವಳ ನೆನಪಲ್ಲಿ ಕವನವ ಬರೆದು ರವಾನಿಸುವನಾತ
ಹುಡುಗಿ ಮುನಿದ ವೇದನೆ ಎಫ್ ಬಿ ಸ್ಟೇಟಸ್ ಮೂಲಕ ಹೇಳುವನಾತ
ಎನ್ ಮಾಡಿದರೆ ಎನ್ ಫಲ ಹುಡುಗಿ ಡೆಲೀಟ್ ಮಾಡೆಂದಳು ಶಿವ

ಹೋಗುವ ಮೊದಲು ಅವಳ ಮೊಗವನ್ನೊಮ್ಮೆ ಕಂಡು
ಬಂದಿದ್ದರೆ ಇವನು ಖುಷಿಯಿಂದ ಇರಬಹುತ್ತೇನೋ
ಆಕೆಯೂ ಇವನಿಗೆ ಮತ್ತಷ್ಟು ಸ್ಪೂರ್ತಿಯಾಗಿರುತ್ತಿದ್ದಳೇನೋ

ಲವ್ವು.. ಇದೆಲ್ಲ ಬೇಕ ಶಿವ? ಅಂತನ್ನುವುದು ಮನದ ಚಿತ್ತ
ಚಂಚಲಾದಾಗ.. ಅಯ್ಯೋ ಬಿಡಿಪ ಹೀಗೆ ಪ್ರಶ್ನೆ ಕೇಳಿದ್ರೆ
ಇದು ಒಂಥರ ಪ್ರೀತಿನೆ, ನೋವೆ ನಮ್ಮ್ ಆಸ್ತಿ ಅನ್ನೋ ಜನ ಜಾಸ್ತಿನೇ..

ರುಕ್ಮಿಣಿ ಎನ್.

ಬಂಧಿಯಾಗಿರಿಸು ಬಾ

ಒಮ್ಮೊಮ್ಮೆ ತಂಗಾಳಿಯಂತೆ ತಂಪನೆರೆವೆ
ಮರುಚಣದಲಿ ಬಿರುಗಾಳಿಯಂತೆ ಮತ್ತಷ್ಟು
ಮಗದಷ್ಟು ಬೆಂದ ಒಡಲ ಉರಿಸುವೆ
ಹೇಳದಷ್ಟು ದುರ್ಬಲೇ ನಾ ಭಾವನೆಗಳ ಹರಿಬಿಡಲು
ಮತ್ತಷ್ಟು ಏಕಾಂತಳು ನಾ ನೀ ಇಲ್ಲದ ಪ್ರತಿ ಕ್ಷಣಗಳು
ನನಗೆ ನೀನು ನಿನಗೆ ನಾನಿರುವಾಗ
ಜರೂರಿ ಏಕಾಗಿದೆ ಪರರ ಗೊಡವೆ?
ಮುಗ್ಧೆ ನಾನಿಲ್ಲಿ ಏನೊಂದೂ ಅರಿಯದಿರಲು
ಸರಿ ತಪ್ಪುಗಳ ವ್ಯತ್ಯಾಸ ತಿಳಿಯದಿರಲು,
ಹದ್ದಿನಂತೆ ಕಾಯುತಿದೆ ಮತ್ತೊಂದು ಭಾವ
ಚಿತ್ತ ಚಂಚಲಗೊಳುವಲಿ ನಿಂತಿದೆ ಮನದ ವೇಗ,
ಎಲ್ಲವೂ ಸುಸೂತ್ರದಂತೆ ಕಾಣುತಿದೆಯಲ್ಲ
ಕದಡಿ ಮಲೀನಗೊಂಡರು ಪ್ರಶಾಂತ ನದಿಯ ನೀರು,
ಮನದಮಂದಿರ ನೀನಿಲ್ಲದೇ ವಿಚಲಿತಗೊಳ್ಳುವುದು
ನನ್ನದಲ್ಲದಿರುವುದನ್ನ ವಿಪರೀತ ಬಯಸುವುದು,
ನೀನಿಲ್ಲದೇ, ನಿನ್ನ ಪ್ರೀತಿಯಿಲ್ಲದೇ ನಾ ಅಪೂರ್ಣಳು
ಚಂಚಲಗೊಂಡ ಮನಸನ್ನು ಅತ್ತಿತ್ತ ಹರಿಯದಂತೆ ನಿನ್ನ 
ಪ್ರೀತಿಯ ಭದ್ರಕೋಟೆಯಲ್ಲಿ ಬಂಧಿಯಾಗಿರಿಸು ಬಾ  ನನ್ನ
ರುಕ್ಮಿಣಿ ಎನ್.